ದುಮ್‍ದುಮೆ ಪದಗಳು -
ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಪ್ರಚಾರದಲ್ಲಿರುವ ಜನಪದ ಕಥನ ಕಾವ್ಯ ಪ್ರಕಾರ. ಈ ಕಾವ್ಯಗಳನ್ನು ಹಾಡುವಾಗ ದಿಮ್ಮು ಎಂಬ ಚರ್ಮವಾದ್ಯವನ್ನು ಬಳಸುತ್ತಾರೆ. ಆ ವಾದ್ಯದ ದುಮ್ ದುಮ್ಮಿ ಅಥವಾ ದಿಮ್ ದಿಮ್ಮಿ ಎಂಬ ಶಬ್ದದಿಂದ ದುಮ್‍ದುಮಿ ಅಥವಾ ದಿಮ್‍ದಿಮಿ ಎಂಬ ಪದ ಹುಟ್ಟಿಕೊಂಡಿರಬೇಕು. ದಿಮ್ಮು ವಾದ್ಯವನ್ನು ಈಗಲೂ ಕರಡೆ ಮಜಲುಗಳಲ್ಲಿ ಹಾಗೂ ಮೋಜು ಮಜಲುಗಳಲ್ಲಿ ಕಾಣಬಹುದಾಗಿದೆ. ದುಮ್ ದಿಮ್ ಎಂಬ ಅನುಕರಣವಾಚಕ ಶಬ್ದದಿಂದಲೇ ದಿಮ್ಮು ಎಂಬ ಹೆಸರು ಆ ವಾದ್ಯಕ್ಕೆ ಬಂದಿದೆ. ದಿಮ್ಮು ಬಳಸಿಕೊಂಡು ಹಾಡುವ ಕಾವ್ಯಗಳೇ ದುಮ್‍ದುಮೆ ಪದಗಳು. ಈ ಪದಗಳ ವೈಶಿಷ್ಟ್ಯ ಆಗಾಗ ತನ್ನ ಗತಿಯನ್ನು ಬದಲಾಯಿಸುವ ದಿಮ್ಮು ವಾದ್ಯದ ತಾಳ-ತಾನಗಳಿಗೆ ಹೊಂದಿಕೊಂಡು ಒಡನುಡಿಯುವುದರಲ್ಲಿ ಅಡಗಿದೆ. ಈ ವಾದ್ಯದ ನೆರವಿಲ್ಲದೆ ಈ ಪದಗಳನ್ನು ಹಾಡುವಂತಿಲ್ಲ. ಹಾಗೆ ಹಾಡಿದರೆ ಅವು ಉತ್ತರ ಕರ್ನಾಟಕದಲ್ಲೆ ವಿಶೇಷವಾಗಿ ಕಾಣಸಿಗುವ ಹೋಳಿಪದಗಳೆನಿಸಿಕೊಳ್ಳುತ್ತವೆ. ಏಕೆಂದರೆ ದುಮ್‍ದುಮೆ ಪದಗಳಿಗೂ ಹೋಳಿ ಪದಗಳಿಗೂ ಇರುವ ಮುಖ್ಯ ವ್ಯತ್ಯಾಸ ಬಳಸುವ ವಾದ್ಯಗಳನ್ನು ಅವಲಂಬಿಸಿದ್ದು. ಅವುಗಳ ಭಾಷೆ, ಶೈಲಿ, ರಚನೆ, ತಂತ್ರ ಮುಂತಾದವುಗಳಲ್ಲಿ ಏಕರೀತಿಯನ್ನು ಕಾಣಬಹುದು. ಆದರೆ ಹೋಳಿಪದಗಳು ಶೃಂಗಾರರಸ ಪ್ರಧಾನವಾಗಿರುತ್ತವೆ. ದುಮ್‍ದುಮೆ ಪದಗಳಲ್ಲಿ ವೀರರಸ ಪ್ರಧಾನವಾದರೂ ಉಳಿದ ರಸಗಳೂ ಉಂಟು.

ಬಿ. ಎಸ್. ಗದ್ದಗೀಮಠ ಅವರು ದುಮ್‍ದುಮೆ ಹಾಗೂ ದುಂದುಭಿ ಎಂಬ ಎರಡು ಕಾವ್ಯ ಪ್ರಕಾರಗಳನ್ನು ಹೇಳುತ್ತಾರೆ. ಇವೆರಡನ್ನೂ ಬಾಜನಗಬ್ಬವೆಂದು ಹೇಳುವ ಅವರು ಪರಸೆ ಕೂಡಿದಾಗ ಎಲ್ಲೆಂದರಲ್ಲಿ ದುಂ ದುಂ ಶಬ್ದಮಾಡುತ್ತ ತಾಳ, ಲಯ, ರಾಗಗಳಿಗೆ ಅನುಸಾರ ಹಾಡುವವು ದುಮ್‍ದುಮೆ ಪದಗಳು ಅರಸಂಗಳದಲ್ಲಿ ರಾಜ ದಿಗ್ವಿಜಯಕ್ಕೆ ಹೊರಟಂದು ದುಂದುಭಿ ವಾದ್ಯಗಳನ್ನು ಮೊಳಗಿಸುತ್ತ ಹಾಡಲಾಗುತ್ತಿದ್ದವು ದುಂದುಭಿ ಪದಗಳು. ಆದರೆ ಇಲ್ಲಿ ದುಂದುಭಿ ಶಬ್ದ ದುಮ್‍ದುಮೆಗೆ ಬಲವಂತವಾಗಿ ಸಮೀಕರಿಸಲು ಪ್ರಯತ್ನಿಸಿದ ಸಂಸ್ಕøತ ಶಬ್ದವೆಂದು ಕಾಣುತ್ತದೆ.

ದುಮ್‍ದುಮೆ ಪದಗಳಿಗೆ ಕರಡೆ, ಸಂಬಾಳ, ಮದ್ದಲೆ ಮೊದಲಾದ ವಾದ್ಯಗಳನ್ನು ಬಳಸಿಕೊಂಡು ಹಾಡುತ್ತಿದ್ದರೆಂಬ ಅಭಿಪ್ರಾಯವೂ ಬಂದಿದೆ. ಈಗಂತೂ ದಿಮ್ಮ ದಮ್ಮಡಿಗಳು ಬಳಕೆಯಲ್ಲಿವೆ.

ದುಮ್‍ದುಮೆ ಪದಗಳು 12ನೆಯ ಶತಮಾನಕ್ಕೂ ಹಿಂದಿನವೆಂಬುದು ಅಭಿಮಾನದ ಮಾತಾದೀತು. ವೀರಶೈವ ಸಮಾಜದಲ್ಲಿ ಕರಡಿಯವರು ಸಂಬಾಳದವರು ಎಂಬ ಪಂಗಡಗಳಿರುವುದರಿಂದ ಇವರೆಲ್ಲ ದುಮ್‍ದುಮೆ ಪದಗಳ ಗಾಯನ ಸಂಪ್ರದಾಯದವರಿರಬೇಕೆಂಬುದು ಗದ್ದಗಿಮಠರ ಅಭಿಪ್ರಾಯ. ಶಿವಶರಣರು ತಮ್ಮ ಧರ್ಮಪ್ರಸಾರಕ್ಕಾಗಿ 12ನೆಯ ಶತಮಾನದಲ್ಲೇ ಈ ಪದಗಳನ್ನು ಬಳಸಿಕೊಂಡರೆಂಬುದಾಗಿ ಹೇಳುವ ಎಂ. ಎಸ್. ಸುಂಕಾಪುರ ಅವರು ಅದರ ಸಮರ್ಥನೆಗಾಗಿ ಕಲಿಕಾಲ ಹೋಳಿ -ಎಂಬ ಪದದ ಪಲ್ಲವಿಯನ್ನು ಉದಾಹರಿಸುತ್ತಾರೆ. ಅದರಲ್ಲಿ ಬಂದಿರುವ ದುಮ್‍ದುಮೆ ಬಸವಂತನ ಹಬ್ಬ ಎಂಬುದರಲ್ಲಿರುವ ಬಸವಂತ ಪದದ ಆಧಾರದ ಮೇಲೆ ಇದು ಬಸವಣ್ಣನವರ ಕಾಲದ್ದೆಂದು ಹೇಳುವುದು ಸರಿಯಲ್ಲವೆಂದು ಕಾಣುತ್ತದೆ. ಬಹುಶಃ ಇವು 15ನೆಯ ಶತಮಾನದಿಂದೀಚಿನವೆಂದು ಹೇಳುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ವಿಜಯ ನಗರದ ದೊರೆ ಪ್ರೌಢದೇವರಾಯನ ಕಾಲದಲ್ಲಿ ವೀರಶೈವ ಧರ್ಮದ ಪ್ರಚಾರ ಕಾರ್ಯಕ್ಕೆ ಹೊಸಹುರುಪು ದೊರೆತಿತು. ನೂರೊಂದು ವಿರಕ್ತರು ಅವತರಿಸಿ ಧರ್ಮ, ತತ್ತ್ವ, ಸಂಸ್ಕøತಿಗಳ ಸಂವರ್ಧನೆಗೆ ಮನಮುಟ್ಟಿ ದುಡಿದರು. ಅವರಲ್ಲೊಬ್ಬನಾದ ಕರಸ್ಥಳದ ನಾಗಿದೇವ ಈ ಕ್ಷೇತ್ರದಲ್ಲಿ ಬಹುವಾಗಿ ಶ್ರಮಿಸಿದವ. ಅವನ ಸಾಹಿತ್ಯ ಸೇವೆಯೂ ಸ್ಮರಣೀಯವಾದದು. ಅವನು ಅನೇಕ ಕಾಲe್ಞÁನದ ಹಾಡುಗಳನ್ನು ರಚಿಸಿದ್ದಾನೆ. ಆ ಹಾಡುಗಳೆಲ್ಲ ದುಮ್‍ದುಮೆಯ ಪದಗಳಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಅವನ ಹಾಡಿನ ಒಂದು ಪಲ್ಲವಿ ಹೀಗಿದೆ:

	ದಿಮ್ಮಿಸಲೆನ್ನಿರೊ ನಮ್ಮವರೆಲ್ಲ ದಿಮ್ಮಿಸಲೆನ್ನಿರೊ 
	ದಿಮ್ಮಿಸಲೆಂದು ಬಂದೀವಿ ಸತ್ಯವುಳ್ಳ ಶರಣರೆಲ್ಲ

ಇಲ್ಲಿ ಬಂದಿರುವ ದಿಮ್ಮಿಸು ಎನ್ನುವ ಪದವನ್ನು ಗಮನಿಸಿದರೆ (ದಿಮ್ಮು+ಇಸು=ದಿಮ್ಮಿಸು) ಡಂಗುರ ಸಾರು ಎಂದರ್ಥವಾಗುತ್ತದೆ. ಇಂದಿನ ದಿನಗಳಲ್ಲೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಸಾರ್ವಜನಿಕ ಹೇಳಿಕೆ ನೀಡುವಾಗ ದಿಮ್ಮು ಬಳಸುತ್ತಾರೆ. ಇಂಥ ದಿಮ್ಮು ವಾದ್ಯದ ಜೊತೆಗೆ ಕೇಳಿಸುವ ಹಾಡೇ ದುಮ್‍ದುಮೆ ಪದ. ಈ ಬಗೆಯ ಸಾಹಿತ್ಯ ಕಿತ್ತೂರು ಅರಸರ ಆಳ್ವಿಕೆಯ ಕಾಲದಲ್ಲಿ ಅಪಾರವಾಗಿ ಬೆಳೆಯಿತು.

ದುಮ್‍ದುಮೆ ಪದಗಳ ಲಕ್ಷಣಗಳನ್ನು ಹೀಗೆ ಸಂಗ್ರಹಿಸಬಹುದು: ಕಥೆ ಸನ್ನಿವೇಶಗಳು ವರ್ಣನೆಯಿಂದ ಕೂಡಿರುತ್ತವೆ. ವರ್ಣನೆಗಳು ಸಂದರ್ಭೋಚಿತವಾಗಿರುತ್ತವೆಯೇ ಹೊರತು ದೀರ್ಘವಾಗಿ ಅಲ್ಲ. ಕಥನ ಕ್ರಿಯೆ ತೀವ್ರಗತಿಯಲ್ಲಿ ಮುನ್ನಡೆಯುತ್ತದೆ. ವೀರರಸಕ್ಕೆ ಪ್ರಾಧಾನ್ಯವಿದ್ದರೂ ಉಳಿದ ರಸಗಳೂ ಬರಬಲ್ಲವು. ನೀತಿ ಪ್ರಸಾರ ಕಾರ್ಯವೂ ಇದರ ಮತ್ತೊಂದು ಅಂಗ. ಓಟ, ರಭಸ, ಉತ್ಸಾಹವೇ ಇದರ ಜೀವಾಳ. ಕವನ ಅಂಶಗಣದ ಮಟ್ಟಿನಲ್ಲಿರುತ್ತದೆ. ಶಿಥಿಲತೆ ಇದರ ಒಳಗುಟ್ಟು. ತಾಳಬದ್ಧವಾಗಿ ವಿವಿಧ ರಾಗಗಳಿಗೆ ಹೊಂದಿಕೊಳ್ಳುವುದರ ವೈಶಿಷ್ಟ್ಯ ಶಿಥಿಲತೆ ಹೆಸರಾದ ಅದರ ಅಂಶಗಣದಲ್ಲಿಯೇ ಅಡಗಿದೆ. ಹಾಡಲು ಬಲ್ಲವರಿಗೆ ಇದರ ಮರ್ಮ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಿಷ್ಟೆ ಪಾದಗಳಿರಬೇಕೆಂಬ ನಿಯಮವಿಲ್ಲದಿದ್ದರೂ ಹತ್ತುಪಾದಗಳಿಗೆ ಮೀರಿ ಬೆಳೆಯುವುದಿಲ್ಲ. ಕೆಲವೊಮ್ಮೆ ಚೌಪದಿಯಲ್ಲೂ ಇರಬಹುದು. ಇಲ್ಲಿನದು ಶುದ್ಧ ಜನಪದ ಭಾಷೆಯಲ್ಲಿಲ್ಲ. ಇವು ಅಕ್ಷರ ಬಲ್ಲವರ ರಚನೆಗಳೆಂಬುದರಲ್ಲಿ ಅನುಮಾನವಿಲ್ಲ. ಇವನ್ನು ಬರೆದ ಕವಿಗಳು ಅಂತ್ಯದಲ್ಲಿ ತಮ್ಮ ನಾಮಮಾಂಕಿತವನ್ನು ಮುದ್ರಿಸುವುದನ್ನೂ ಮರೆತಿಲ್ಲ. ಈ ಕಾರಣದಿಂದ ಇವನ್ನು ಸಮಷ್ಟಿ ಸೃಷ್ಟಿಯೆಂದು ಹೇಳುವುದಕ್ಕಾಗುವುದಿಲ್ಲ. ಇವು ಜನಪದ ಸಮುದಾಯಕ್ಕೆ ಸಮೀಪದಲ್ಲಿವೆ ನಾಗರಿಕ ಸಮುದಾಯಕ್ಕೆ ದೂರವಾಗಿವೆ. ಶಿಷ್ಟ ಭಾಷೆ ಹಾಗೂ ಪ್ರಾಸದ ವೈಭವಕ್ಕೆ ಈ ಉದಾಹರಣೆ ನೋಡಿ.

	ಈಶ ಮಾಹೇಶ ಗೌರೀಶ ಗಜಾಂತಕ
	ನಾಶಮುಕ್ತೀಶ ಮಲ್ಲೇಶ್ವರನೆ | ಪುರ
	ನಾಶ ಭೂತೇಶ ಸರ್ವೇಶ್ವರನೆ | ಜಗ
	ದೀಶ ಗಂಗಾಬೆಯ ತೋಷ ಭೂಷ ಅಘ

	ನಾಶ ರಹಿತ ಆಶ ಸಲಹು ಸೋಮೇಶ
ಮೇಲಿನ ಉದಾಹರಣೆಯಲ್ಲಿ ಆದಿಪ್ರಾಸವನ್ನು ಮಾತ್ರ ಕಾಣುತ್ತೇವೆ, ಉತ್ತರ ಕರ್ನಾಟಕದ ಆಡುನುಡಿಯ ಸೊಗಸಾಗಲಿ ಬನಿಯಾಗಲಿ ಇಲ್ಲಿ ಎಳ್ಳಷ್ಟೂ ಕಂಡು ಬರುವುದಿಲ್ಲ.
ಚೌಪದ ರೂಪದ ದುಮ್‍ದುಮೆಗಳಲ್ಲಿ ಆದಿ- ಅಂತ್ಯಪ್ರಾಸಗಳೆರಡನ್ನೂ ಕಾಣಬಹುದು.

	ಕರೆಯಬಂದವರೆಲ್ಲ ಬೆರಗಾಗಿ ನೋಡಿ
	ಶರೀರದ ನಾಡಿಯ ಹಿಡಿದು ಮಾತಾಡಿ
	ಭರದಿಂದ ಬಂದಾರೊ ಅರಮನಿಗೋಡಿ
	ದೊರೆ ಮಲ್ಲ ಸರ್ಜನ ಕಳಹೊ ದಯಮಾಡಿ

ಈ ಕಾವ್ಯಗಳ ಮೇಲೆ ಶಿಷ್ಟಸಂಪ್ರದಾಯದ ಪ್ರಭಾವ ಹೆಚ್ಚಾಗಿದೆ. ಒಬ್ಬ ದುಮ್‍ದುಮೆ ಕವಿ ಕಾವ್ಯದ ಅಂತ್ಯದಲ್ಲಿ ಒಂದು ಕಂದಪದ್ಯವನ್ನು ಬರೆದಿದ್ದಾನೆ.

	ಗುರು ಲಘು ಗಣನೇಮಂಗಳ್
	ವರ ಪ್ರಾಸ ಲಕ್ಷಣ ವಡಿಗಳ್ ತಪ್ಪಾಗಿರಲಿ
	ನೆರೆಜಾಣರು ತಿದ್ದೆ ನಿಮಗೆ
	ಸುರಲೋಕದ ಪದವಿಯನೀವ ತುರುವಿ ಗಿರಿಶಂ

ಕಥೆಯನ್ನು ತೀವ್ರಗತಿಯಲ್ಲಿ ಆದರೂ ಶಕ್ತಿಯುತವಾಗಿ ನಿರೂಪಿಸುವ ಕೌಶಲಕ್ಕೆ ಅಭಿಮನ್ಯುವಿನ ಕಾಳಗದ ಈ ಸಾಲುಗಳನ್ನು ನೋಡಿ :

	ಕ್ಷಿತಿಪತಿ ಕೇಳ್ ಚಕ್ರವ್ಯೂಹದೊಳಭಿಮನ್ಯು
	ಅತಿರಮ್ಯ ಯುದ್ಧವ ಮಾಡಿದನು | ಬಹ
	ಖತಿಯಿಂದ ಶಿರವ ಚಂಡಾಡಿದನು| ಅಲ್ಲೆ
	ಹತವಾಗಿ ಮುಕ್ತಿಯ ಕೂಡಿದನು | ಜಯ
	ದ್ರತ ಮಸ್ತಕ ನರಹರಿಯು ಎಚ್ಚನುಯೆಂದು
	ಯತಿರಾಯ ಪೇಳಿದ ಹಿತವ ಭೂವರಗೆ

ಸುಭದ್ರೆ ಹಸುಮಗವನ್ನು ಯುದ್ಧಕ್ಕೆ ಕಳಿಸುವುದೆ ಎಂದಾಗ ಅಭಿಮನ್ಯುವಿನ ಪರಾಕ್ರಮದ ಮಾತುಗಳಿಗಾಗಿ ಈ ಉದಾಹರಣೆ :

	ಹಡೆದವ್ವ ನೀ ಎನ್ನ ತಡೆವುದುಚಿತವೇನ
	ಕೊಡುಗೆದ್ದು ಬಾ ಎಂದು ಹರಕೆಯನು |ಶೋಕ	
ನುಡಿ ಸಲ್ಲ ಬಿಡು ಚಿಂತೆಯನು | ನಿನ್ನ
ನುಡಿ ಗೇಳಿ ಬಿಡೆನು ನಾನು ಕೇಳಿದೆನು | ಎಂದು 
ಒಡಗೊಂಡು ಸಾರಥಿ ವೀರ ಬೊಬ್ಬೆಗಳಿಂದ
ಪೊಡಮಟ್ಟು ಬರುವೆನೆಂದನು.

ವರ್ಣನೆಗಳಲ್ಲಿ ದುಮ್‍ದುಮೆ ಕವಿ ಹಿತಮಿತ ಚತುರತೆಯನ್ನು ಮರೆಯಬಲ್ಲನೆಂಬುದಕ್ಕೆ ಕೀಚಕ ದ್ರೌಪದಿಯನ್ನು ಕಂಡು ಹೇಳುವ ಮಾತುಗಳಿವು :

	ಒಬ್ಬ ದೂತನ ವಾರಿಯೊಳು ನಿಂತು ತನ್ನಯ
	ಹುಬ್ಬೀಗೆ ಕೈ ಹಚ್ಚಿ ನೋಡಿದನು | ಇಂಥ
	ಹೆಣ್ಣೀನ ಸಮನಿಲ್ಲ ನೋಡೆಂದನು | ಬಣ್ಣ
	ನಿಂಬೀಯ ಹಣ್ಣು ಕಾಣೆಂದನು | ಇಂಥ
	ಹೆಣ್ಣೀನ ರೂಪವ ಕಂಡು ಸೈರಿಸಲಾರೆ
	ಇನ್ನೇನು ಗತಿಯೆಂದು ಅಂದ ಕೀಚಕನು
	ಬಡನಡು ಬಳಕುವ ಹೆಣ್ಣೀನ ನಡಿಗೆಯು
	ನಡೆದರೆ ಮದ್ದಾನೆಯಂದದಲಿ | ಬಲು
	ನುಡಿವಳು ಸ್ವರ ಕೋಕಿಲೆಯಂದದಲಿ | ತಾನು
	ಕಡೆಗಣ್ಣ ನೋಟದಿ ನೋಡುತಲಿಹಳು | ಇಂಥ
	ಸುಂದರಿ ಸುಗುಣಿ ಇಂದಾಗದಿರೆ ಎನಗೆ
	ಇನ್ನೆಂದಿಗೆ ಆಗೋದು ಎಂದ ಕೀಚಕನು

ದುಮ್‍ದುಮೆ ಪದಗಳನ್ನು ಬರೆದ ಕವಿಗಳೆಲ್ಲರ ವಿವರಗಳನ್ನು ಸದ್ಯಕ್ಕೆ ಒದಗಿಸುವುದು ಸಾಧ್ಯವಾಗುವಂತಿಲ್ಲ. ಈ ವರಗೆ ಪ್ರಕಟವಾಗಿರುವ ಕೃತಿಗಳ ರಚನಕಾರರಲ್ಲಿ ಮಲ್ಲಸರ್ಜ ದೊರೆಯ ಆಸ್ಥಾನದಲ್ಲಿದ್ದ ರುದ್ರ ಕವಿ, ಕುಂದಗೋಳದ ಬಸವಲಿಂಗ, ಚನ್ನಬಸವ, ನವಿಲುಗುಂದದ ಬಸವಲಿಂಗ, ಗುರುಶಾಂತವೀರಣ್ಣ, ಮಾಗಡಿ ಬಸವ, ಮುನಿಪುರದ ಪ್ರಭುವಿನ ಶಿಷ್ಯ, ಉಜ್ಜಯಿನಿ ಮರುಳಸಿದ್ಧನ ಬಾಲಕ, ಗೋಕಾವಿ ಸಿದ್ಧಸೇವಕ ಮುಂತಾದವರು ಪ್ರಸಿದ್ಧರು. ಕೆಲವು ದುಮ್‍ದುಮೆ ಪದಗಳು ಲಾವಣಿ ಎಂಬ ಹೆಸರಿನಿಂದಲೂ ಕೆಲವು ಲಾವಣಿಗಳು ದುಮ್‍ದುಮೆ ಪದಗಳು ಎಂಬ ಹೆಸರಿನಿಂದಲೂ ಪ್ರಕಟವಾಗಿರುವ ಸಾಧ್ಯತೆ ಎದ್ದುಕಾಣುತ್ತದೆ. ಕಿತ್ತೂರಿನ ಐತಿಹಾಸಿಕ ಘಟನೆಗಳನ್ನು ಕುರಿತ ಕಾವ್ಯಗಳಲ್ಲಿ ಈ ಬಗೆಯ ಗೊಂದಲವೇರ್ಪಟ್ಟಿದೆ. ಪ್ರಕಟಿತ ಕೃತಿಗಳಲ್ಲಿ ದೊಡ್ಡ ಭಾವೆಪ್ಪ ಮೂಗಿ ಅವರ ದೊರೆಮಲ್ಲಸರ್ಜನ ದುಮ್‍ದುಮೆ(1951). ಮೊದಲನೆಯದೆಂದು ಕಾಣುತ್ತದೆ. ಅನಂತರ ಗದ್ದಗಿಮಠ ಅವರಿಂದ ಕುಮಾರ ರಾಮನ ದುಮ್‍ದುಮೆ ಪ್ರಕಟವಾಗಿದೆ (1959). ಪ್ಲೀಟ್ ಪ್ರಕಟಿಸಿದ್ದ ಕಿತ್ತೂರಿಗೆ ಸಂಬಂಧಿಸಿದ ಐತಿಹಾಸಿಕ ಕಾವ್ಯಗಳು ಲಾವಣಿಗಳೇ ಅಥವಾ ದುಮ್‍ದುಮೆ ಪದಗಳೇ ಎಂಬುದನ್ನು ಉತ್ತರ ಕರ್ನಾಟಕದ ಜಾನಪದ ವಿದ್ವಾಂಸರು ನಿರ್ಧರಿಸಬೇಕಾಗಿದೆ. ಸುಪ್ರಸಿದ್ಧ ಜನಪದ ಕವಿ ಬಾಳಗೋಪಾಳನ ಕೃತಿಗಳಲ್ಲಿ ಯಾವುವು ದುಮ್‍ದುಮೆ ಪದಗಳೆಂಬುದನ್ನು ಸಂಪಾದಕರು ಗುರುತಿಸದಂತೆ ಕಾಣುವುದಿಲ್ಲ. ಸುಂಕಾಪುರ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಜೀವನ ಜೋಕಾಲಿ 4 ಮತ್ತು 5ನೆಯ ಸಂಪುಟಗಳು ಕ್ರಮವಾಗಿ ಹೋಳಿಪದ ಹಾಗೂ ದುಮ್‍ದುಮೆಪದ ಎಂಬ ಶೀರ್ಷಿಕೆಯನ್ನು ಹೊತ್ತಿದ್ದರೂ ಹೋಳಿ ಹಾಡಿಗೂ ದುಮ್‍ದುಮೆಪದಕ್ಕೂ ಇರುವ ಸಾದೃಶ್ಯವೈದೃಶ್ಯಗಳನ್ನು ಪ್ರಸ್ತಾಪ ಮಾಡಿಯೂ ಅವುಗಳನ್ನು ಕರಾರುವಕ್ಕಾಗಿ ವಿಂಗಡಿಸಿ ಪ್ರಕಟಿಸುವಾಗ ಸಂಪಾದಕರುಗೊಂದಲಕ್ಕೀಡಾಗಿದ್ದಾರೆ. ತಾಡಪತ್ರಗಳಲ್ಲಿ ಹಾಗೂ ಜನತೆಯ ಬಾಯಲ್ಲಿ ಉಳಿದಿರುವ ಈ ಸಂಪ್ರದಾಯದ ಕಾವ್ಯಗಳನ್ನು ಪಾಠಾಂತರಗಳೊಡನೆ ಪರಿಷ್ಕರಿಸಿ ಪ್ರಕಟಿಸುವ ಕಾರ್ಯ ಜರೂರಾಗಿ ಆಗಬೇಕಾಗಿದೆ.
(ಪಿ.ಕೆ.ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ